ಪ್ಲ್ಯೆಖಾನಾಫ್, ಗ್ಯಾಗ್ರ್ಯಿ ವಲ್ಯೆಂಟ್ಯೇನವ್ಯಿಚ್
1856-1981 ರಷ್ಯನ್ ಮಾಕ್ರ್ಸ್‍ವಾದಿ. ಟಾಂಬಾಫ್ ಪ್ರಾಂತ್ಯದ ಗುಡಲಾಫ್ಕದಲ್ಲಿ 1856ರ ಡಿಸೆಂಬರ್ 11ರಂದು ಜನಿಸಿದ. ಇವನ ತಂದೆ ಜಮೀನ್ದಾರ. ಈತ ವಿದ್ಯಾರ್ಥಿದಶೆಯಲ್ಲಿದ್ದಾಗಲೇ 1857ರಲ್ಲಿ ನಾರೋಡ್ನಿಕಿ ಎಂಬ ಉಗ್ರವಾಗಿ ಚಳವಳಿಯಿಂದ ಆಕರ್ಷಿತನಾದ. ಶೀಘ್ರದಲ್ಲೇ ಶ್ರಮಜೀವಿಗಳ ಸಂಘಟನೆಯ ಕಾರ್ಯ ಕೈಗೊಂಡು ನ್ಯಾಯಬಾಹಿರವಾದ ಜೆಮ್ಲ್ಯಾ ವೋಲ್ಯ (ಭೂಮಿ ಮತ್ತು ಸ್ವಾತಂತ್ಯ್ರ) ಎಂಬ ಸಂಘದ ಸದಸ್ಯನಾದ. ಈ ಸಂಘದ ಪ್ರಕಟನೆಗಳ ಸಂಪಾದಕನೂ ಆಗಿದ್ದ. ಈ ಸಂಘದ ಭಯೋತ್ಪಾದಕ ಕಾರ್ಯಕ್ರಮಗಳು ಇವನ ಮನಸ್ಸಿಗೆ ಹಿಡಿಸಲಿಲ್ಲವಾದ್ದರಿಂದ 1857ರಲ್ಲಿ ಇದನ್ನು ತ್ಯಜಿಸಿ ತನ್ನದೇ ಆದ ಚಿರ್ನಿ ಪೆರೆಡೆಲ್ (ಕಪ್ಪುಪುನರ್ವಿತರಣೆ) ಎಂಬ ಗುಂಪನ್ನು ಕಟ್ಟಿದ. ಜನಸ್ತೋಮದಲ್ಲಿ ಸಮಾಜವಾದವನ್ನು ಇಡಬೇಕೆಂಬುದೇ ಈ ಗುಂಪಿನ ಮುಖ್ಯ ಉದ್ದೇಶವಾಗಿತ್ತು. ಕೇವಲ ಉಗ್ರವಾದದಿಂದ ಸಮಾಜವಾದ ಬೆಳೆಯುವುದಿಲ್ಲವೆಂಬುದು ಇವನ ಅಭಿಪ್ರಾಯವಾಗಿತ್ತು.

1880ರಲ್ಲಿ ಪ್ಲೇಖಾನಾಫ್ ರಷ್ಯ ದೇಶವನ್ನು ಬಿಟ್ಟು ಪಶ್ಚಿಮ ಯೂರೋಪಿಗೆ ಹೋಗಬೇಕಾಯಿತು. ಈತ ಅಲ್ಲಿ ಮಾಕ್ರ್ಸವಾದಿ ಸಾಹಿತ್ಯವನ್ನು ಅಭ್ಯಾಸ ಮಾಡಿದ. ಕಾರ್ಲ್ ಮಾಕ್ರ್ಸ್ ತಿಳಿಸಿರುವ ವೈಜ್ಞಾನಿಕ ಸಮಾಜವಾದವೇ ರಷ್ಯದ ವಿವಿಧ ಸಮಸ್ಯೆಗಳಿಗೆ ಸೂಕ್ತ ಪರಿಹಾರವೆಂದು ಇವನು ಮನಗಂಡ. ರಷ್ಯದಲ್ಲಿ ಮಾಕ್ರ್ಸ್‍ವಾದದ ಪ್ರಚಾರಕ್ಕಾಗಿ 1883ರಲ್ಲಿ ಇವನು ಆಸ್ಪೊಬೋಜ್ದೆನೀ ಟ್ರೂಡ್ (ಕಾರ್ಮಿಕ ವಿಮೋಚನೆ) ಎಂಬ ತಂಡವನ್ನು ಕಟ್ಟಿದ. ಈತ ಅನೇಕ ಹೊತ್ತಗೆಗಳನ್ನು ಹೊರಡಿಸಿ. ಸಮಾಜದಲ್ಲಿ ಶ್ರಮಜೀವಿಗಳ ಕ್ರಾಂತಿಕಾರಿ ಪಾತ್ರವನ್ನು ವಿವರಿಸಿದ. ಶ್ರಮಜೀವಿಗಳು ಸಂಪೂರ್ಣವಾಗಿ ಸಂಪೂರ್ಣವಾಗಿ ಸುಸಂಘಟಿತರಾಗಬೇಕಾದರೆ ಅದಕ್ಕೆ ಮೊದಲಯ ಬಂಡವಾಳ ವ್ಯವಸ್ಥೆಯ ಉನ್ನತ ಬೆಳವಣಿಗೆ ಆಗಿರುತ್ತದೆ. ಬಂಡವಾಳ ವ್ಯವಸ್ಥೆ ಬೆಳದಂತೆ ಅದರಲ್ಲಿಯ ಅಂತರ್ವಿರೋಧೀ ಪ್ರವೃತ್ತಿಗಳು ಪ್ರಬಲವಾಗುತ್ತವೆ. ತನ್ಮೂಲಕ ಶ್ರಮಜೀವಿಗಳ ಬಲಯುತ ಸಂಘಟನೆಗೆ ಕಾರಣವಾಗುತ್ತವೆ. ಕಟ್ಟಕಡೆಯಲ್ಲಿ ಸುಸಂಘಟಿತ ಕಾರ್ಮಿಕರು ಬಂಡವಾಳ ವ್ಯವಸ್ಥೆಯನ್ನು ಕ್ರಾಂತಿಯ ಮೂಲಕ ಅಂತ್ಯಗೊಳಿಸಿ, ಕಾರ್ಮಿಕರ ಸರ್ವಾಧಿಕಾರವನ್ನು ಸ್ಥಾಪಿಸಿ ಸಮಾಜವಾದವನ್ನು ಸ್ಥಾಪಿಸುವರು. ಬಂಡವಾಳ ವ್ಯವಸ್ಥೆಯ ಬೆಳವಣಿಗೆಯೇ ಸಮಾಜವಾದವನ್ನು ನಿರ್ಮಿಸಲು ತಕ್ಕ ವಾತಾವರಣವನ್ನೂ ಸನ್ನಿವೇಶವನ್ನೂ ಸೃಷ್ಟಿ ಮಾಡುತ್ತದೆ ಎಂದು ಮುಂತಾಗಿ ಇವನು ಈ ಕಿರುಹೊತ್ತಗೆಗಳಲ್ಲಿ ಪ್ರತಿಪಾದಿಸಿದ. ಇವು ಮಾಕ್ರ್ಸ್ ಮತ್ತು ಎಂಗೆಲ್ಸರ ವಿಚಾರಗಳಿಗೆ ಅನುಗುಣವಾಗಿವೆ.

1890ರಲ್ಲಿ ಈತ ಐತಿಹಾಸಿಕ ಭೌತಿಕವಾದವನ್ನು ಕುರಿತು ಪುಸ್ತಕವನ್ನು ಬರೆದ. ಇದು ಮಾಕ್ರ್ಸ್ ಸಿದ್ಧಾಂತವನ್ನು ಪ್ರತಿಪಾದಿಸುವ ಒಂದು ಪ್ರಸಿದ್ಧ ಗ್ರಂಥವೆಂದು ಪರಿಗಣಿತವಾಗಿದೆ. ಆಗ ಬಹುಮಟ್ಟಿಗೆ ರಷ್ಯದಲ್ಲಿ ಪ್ರಸಿದ್ಧವಾಗಿದ್ದ ಮೈಖೇಲೋವ್ಸ್ಕಿಯ ಕಾಲ್ಪನಿಕ ಸಮಾಜವಾದಕ್ಕೆ ಉತ್ತರವಾಗಿ ಪ್ಲೈಖಾನಾಫ್ ಇದನ್ನು ಬರೆದ. ಇದರ ಪ್ರಕಟಣೆಯ ಅನಂತರ ಬುದ್ಧಿಜೀವಿಗಳ ಮತ್ತು ಕಾರ್ಮಿಕರ ವಿಚಾರಸರಣಿ ಇದರ ಕಡೆಗೆ ವಾಲಿತು. ಅನೇಕ ಕಾರ್ಮಿಕ ಸಂಘಗಳು ಇವನ ವಾದವನ್ನು ಅಂಗೀಕಾರ ಮಾಡಿ ಈತನ ಮಾರ್ಗದರ್ಶನದಲ್ಲಿ ತಮ್ಮ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಿದುವು.

ಪ್ರಜೆಗಳ ಹೆಸರಿನಲ್ಲಿ ಕ್ರಾಂತಿಕಾರಿ ಅಲ್ಪಸಂಖ್ಯಾತರು ಪ್ರಜೆಗಳ ಪರವಾಗಿ ಅಧಿಕಾರ ಸೂತ್ರವನ್ನು ಹಿಡಿದುಕೊಳ್ಳುವುದು ಸರಿಯಲ್ಲವೆಂಬುದು ಪ್ಲೈಖಾನಾಫನ ಅಭಿಪ್ರಾಯವಾಗಿತ್ತು. ಕ್ರಾಂತಿ ಯಶಸ್ವಿಯಾಗಿ ಶಾಶ್ವತವಾಗಿ ಆಗಬೇಕಾದರೆ ಅದು ಸಮಗ್ರ ಜನಸ್ತೋಮದ್ದಾಗಿರಬೇಕು. ಮುಖ್ಯವಾಗಿ ಕೈಗಾರಿಕಾ ಕಾರ್ಮಿಕ ವರ್ಗದ್ದಾಗಿರಬೇಕು. ಇದು ಕ್ರಾಂತಿಕಾರಿ ಸಮಾಜವಾಗಿ-ಜನತಂತ್ರವಾದಿ ಪಕ್ಷದ ಮಾರ್ಗದರ್ಶನದಲ್ಲಿ ಊಳಿಗಮಾನ್ಯವಾದಿ ನಿರಂಕುಶ ಪ್ರಭುತ್ವದ ವಿರುದ್ಧವಾಗಿ ಇಡೀ ರಷ್ಯನ್ ಜನತೆಯ ಹೋರಾಟದ ಮುಖಂಡತ್ವ ವಹಿಸಬೇಕು. ಹೀಗೆ ಉದ್ಭವಿಸುವ ಬೂಜ್ರ್ವಾ-ಜನತಂತ್ರವಾದಿ ಕ್ರಾಂತಿಯಿಂದ ಸಮಾಜವಾದಕ್ಕೂ ಶ್ರಮಜೀವಿವರ್ಗದ ಸರ್ವಾಧಿಕಾರಕ್ಕೂ ಹಾದಿ ಸುಗಮವಾಗುತ್ತದೆ. ಐತಿಹಾಸಿಕ ವಿಕಾಸದ ಅನಿವಾರ್ಯ ನಿಯಮಗಳ ಪರಿಣಾಮವಾಗಿ ಸಮಾಜವಾದ ಬಂದೇ ಬರುವುದೆಂಬುದಾಗಿ ಪ್ಲೈಖಾನಾಫ್ ನಂಬಿದ್ದ. ಮಾಕ್ರ್ಸ್‍ನ ತಾರ್ಕಿಕ ಐತಿಹಾಸಿಕ ಭೌತಿಕವಾದದಲ್ಲಿ ಇವನು ದೃಢವಾದ ನಂಬಿಕೆ ಇಟ್ಟಿದ್ದ. ಸೋವಿಯೆತ್ ದೇಶದಲ್ಲಿ ಇವನ ಅಭಿಪ್ರಾಯಗಳಿಗೆ ವಿಶೇಷ ಗಮನ ಸಂದಿದೆ.

ರಷ್ಯನ್ ಸಮಾಜವಾದಿ-ಜನತಂತ್ರಾತ್ಮಕ ಕಾರ್ಮಿಕ ಪಕ್ಷದ ಮುಖಂಡರಲ್ಲಿ ಪ್ಲೈಖಾನಾಫ್ ಒಬ್ಬನಾಗಿದ್ದ. ಆದರೆ ಇವನಿಗಿಂತ ಹೆಚ್ಚಿನ ಖ್ಯಾತಿಯನ್ನು ಲೆನಿನ್ ಪಡೆದಿದ್ದ. ಆ ಪಕ್ಷದ ಪತ್ರಿಕೆಯಾದ ಇಸ್ಕ್ರ (ಕಿಡಿ) ಎಂಬುದನ್ನು ಇಬ್ಬರೂ ಸೇರಿ ಪ್ರಕಟಿಸುತ್ತಿದ್ದರು. 1903ರಲ್ಲಿ ಪಕ್ಷದ ಎರಡನೆಯ ಸಮ್ಮೇಳನದಲ್ಲಿ ಮೆನ್ಷೆವಿಕ್ ಗುಂಪಿಗೆ ವಿರುದ್ಧವಾಗಿ ಪ್ಲೈಖಾನಾಫ್ ಲೆನಿನ್ನನನ್ನು ಬೆಂಬಲಿಸಿದ. ಆದರೆ ಆ ವರ್ಷ ನವೆಂಬರ್ ತಿಂಗಳಲ್ಲಿ ಇವರಿಬ್ಬರಿಗೂ ಭಿನ್ನಾಭಿಪ್ರಾಯಗಳು ಉಂಟಾಗಿ ಇಬ್ಬರೂ ಬೇರೆಬೇರೆಯಾದರು. ಮೊದಲು ರಷ್ಯದಲ್ಲಿ ರೈತವರ್ಗವನ್ನು ಹಿಂಸಾತ್ಮಕ ಚಟುವಟಿಕೆಗಳಿಗೆ ಪ್ರಚೋದಿಸುತ್ತಿದ್ದ ಜಾಕೋಬಿನ್ ಪ್ರವೃತ್ತಿಗಳು ಬೋಲ್ಷೆವಿಸಮ್‍ನಲ್ಲಿ ಮತ್ತೆ ತಲೆ ಎತ್ತುತ್ತಿವೆಯೆಂಬುದು ಈತನ ಸಂಶಯವಾಗಿತ್ತು. ರಾಜ್ಯಾಧಿಕಾರವನ್ನು ಪಡೆದುಕೊಂಡು, ಅನಂತರ ಮೇಲಿನಿಂದ ಸಮಾಜವಾದವನ್ನು ಹೆರಲು ಪಕ್ಷವನ್ನು ಸಾಧನವಾಗಿ ಮಾಡಿಕೊಳ್ಳಲು ಲೆನಿನ್ ಪ್ರಯತ್ನಿಸುತ್ತಿದ್ದುದಾಗಿ ಪ್ಲೈಖಾನಾಫ್ ಭಾವಿಸಿದ. ಐತಿಹಾಸಿಕ ಪರಿಸ್ಥಿತಿಗಳು ಪಕ್ವವಾಗಿವೆಯೇ ಇಲ್ಲವೇ ಎಂಬುದನ್ನು ಗಮನಿಸದೆ ಹೀಗೆ ಮಾಡಲಾಗದೆಂಬುದು ಇವನ ವಾದ. 1905-1906ರ ಕ್ರಾಂತಿವಾದಿ ಬಿಕ್ಕಟ್ಟಿನಲ್ಲಿ ನಿರಂಕುಶಾಧಿಕಾರದ ವಿರುದ್ಧವಾಗಿ ಸಮಾಜವಾದಿಗಳು ಬೂಜ್ರ್ವಾ ಉದಾರವಾದಿಗಳೊಂದಿಗೆ ಕೂಡಿ ಕೆಲಸ ಮಾಡುವುದು ಅವಶ್ಯವೆಂದು ಇವನು ಪ್ರತಿಪಾದಿಸಿದ, ಆದರೆ ಪಕ್ಷದ ಸದಸ್ಯವರ್ಗದಲ್ಲಿ ಇವನ ಅಭಿಪ್ರಾಯಕ್ಕೆ ಮನ್ನಣೆ ಸಿಗಲಿಲ್ಲ. 1917 ರಲ್ಲಿ ಮತ್ತೆ ಇದೇ ಪರಿಸ್ಥಿತಿ ಉದ್ಭವವಾಗಿತ್ತು. ಇವನು ರಷ್ಯಕ್ಕೆ ಹಿಂದಿರುಗಿದ. ಯುದ್ಧನಿರತವಾಗಿದ್ದ ರಷ್ಯನ್ ರಾಷ್ಟ್ರದ ರಕ್ಷಣೆಗಾಗಿ ವರ್ಗಕಲಹವನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕೆಂದು ಇವನು ವಾದಿಸಿದ. ಆದರೆ ಇವನ ಅಭಿಪ್ರಾಯಕ್ಕೆ ಬೆಂಬಲ ದೊರಕಲಿಲ್ಲ.

ಅದೇ ವರ್ಷ ರಷ್ಯದಲ್ಲಿ ಬೋಲ್ಷೆನಿಕ್ ಕ್ರಾಂತಿಯಾಯಿತು. ಇದು ಮಾಕ್ರ್ಸ್ ತತ್ತ್ವಗಳ ಉಲ್ಲಂಘನೆಯೆಂದು ಪ್ಲೈಖಾನಾಫ್ ಟೀಕಿಸಿದ. ಇಂಥ ಟೀಕೆಯ ಕಾರಣದಿಂದ ಕೆಲವು ಕ್ರಾಂತಿಕಾರರು ಉದ್ರೇಕಗೊಂಡರು. ಪ್ಲೈಖಾನಾಫನ ಪ್ರಾಣಕ್ಕೆ ಅಪಾಯವಿತ್ತು. ಇವನು ಫಿನ್ಲೆಂಡಿಗೆ ಓಡಿಹೋದ. ಪ್ಲೈಖಾನಾಫ್ 1918ರ ಮೇ 30ರಂದು ಟೆರಿಯೋಕಿಯಲ್ಲಿ ಕಾಲವಾದ.

ಮಾಕ್ರ್ಸ್ ಸಿದ್ಧಾಂತದ ಆಚಾರ್ಯಪುರುಷರಲ್ಲಿ ಪ್ಲೈಖಾನಾಫನಿಗೂ ಗಣ್ಯಸ್ಥಾನವಿದೆ. ಇವನ ಐತಿಹಾಸಿಕ ಭೌತಿಕವಾದ ಕುರಿತ ಕೃತಿ ಮಾಕ್ರ್ಸ್ ಸಿದ್ಧಾಂತದ ಒಂದು ಉತ್ತಮ ಭಾಷ್ಯವೆಂದು ಜಗತ್ತಿನ ಅನೇಕ ತತ್ತ್ವಶಾಸ್ತ್ರಜ್ಞರು ಒಪ್ಪಿಕೊಂಡಿದ್ದಾರೆ. ಮಾಕ್ರ್ಸ್‍ವಾದ ರಾಜಕೀಯ ಮತ್ತು ಸಾಮಾಜಿಕ ಸಿದ್ಧಾಂತಗಳ ಮೇಲೆ ಮಾತ್ರವಲ್ಲದೆ ಕಲೆ, ಸೌಂದರ್ಯಶಾಸ್ತ್ರ, ಸಾಹಿತ್ಯ, ಮೊದಲಾದುವುಗಳ ಮೇಲೆಯೂ ತನ್ನ ಪ್ರಭಾವ ಬೀರಿದೆ. ಮಾನವನ ವಿವಿಧ ಜೀವನಕ್ರಮಗಳನ್ನು ಮಾಕ್ರ್ಸವಾದಕ್ಕೆ ಅನುಗುಣವಾಗಿ ವಿಮರ್ಶೆ ಮಾಡುವ ಸಾಹಸವನ್ನು ಕೈಗೊಂಡ ಪ್ರಥಮ ಚಿಂತನಕಾರ ಪ್ಲೈಖಾನಾಫ್. ಕಲೆಯ ಬೆಳವಣಿಗೆ ಆರ್ಥಿಕ ವ್ಯವಸ್ಥೆಯ ತಳಹದಿಯ ಮೇಲೆ ನಿಂತಿದೆ ಹಾಗೂ ಸಮಾಜದ ಆರ್ಥಿಕ ವ್ಯವಸ್ಥೆಯನ್ನು ಪ್ರತಿಬಿಂಬಿಸುವುದಾಗಿದೆ. ಹಾಗೆಂದ ಮಾತ್ರಕ್ಕೆ ಅದರಲ್ಲಿ ಕಾರ್ಯ-ಕಾರಣ ಸಂಬಂಧವನ್ನು ಕಾಣಲು ಯತ್ನಿಸಬಾರದು ಎಂಬುದು ಪ್ಲೈಖಾನಾಫನ ಅಭೀಮತ.					    (ಎಸ್.ಡಿ.ಎಂ.ಯು.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ